ಶಿವರಾತ್ರಿಯ ಶಿವ ಜಾತ್ರೆ…….

Team Newsnap
4 Min Read

ಒಮ್ಮೆ ನೋಡ ಬನ್ನಿ ನಮ್ಮೂರ ಶಿವ ಜಾತ್ರೆ,
ಜೀವನೋತ್ಸಾಹ ತುಂಬುವ ನಮ್ಮೂರ ಜಾತ್ರೆ,
ಬದುಕಲು ಕಲಿಸುವ ನಮ್ಮೂರ ಜಾತ್ರೆ.

ಅಗೋ ಅಲ್ಲಿ ನೋಡಿ ಸುಂಕದವನೊಬ್ಬ ಬೆಳಗ್ಗೆಯೇ ಚೀಲ ಹಿಡಿದು ನಿಂತಿದ್ದಾನೆ. ಎಷ್ಟೊಂದು ಲವಲವಿಕೆ ಅವನ ಮುಖದಲ್ಲಿ.

ಬಂದಳು ನೋಡಿ ಸೊಪ್ಪಿನ ಅಜ್ಜಿ. ನೆಲದ ಮೇಲೆ ಗೋಣಿಚೀಲ ಹಾಸಿ ವಿವಿಧ ಸೊಪ್ಪಿನ ಕಟ್ಟುಗಳನ್ನು ಕಟ್ಟಿ ಅದರ ಮೇಲೆ ನೀರು ಚಿಮುಕಿಸಿ ಗಿರಾಕಿಗಳಿಗಾಗಿ ಕಾಯುತ್ತಾ ಕುಳಿತಿದ್ದಾಳೆ..

ಬಂದಾ ನೋಡಿ ತರಕಾರಿಯಾತ. ಟಮ್ಯಾಟೋ ಈರುಳ್ಳಿ ಆಲೂ ಗಡ್ಡೆ ಸೌತೆ ಮೂಟೆಗಳನ್ನು ಬಿಡಿಸಿ ಜೋಡಿಸುತ್ತಿದ್ದಾನೆ. ಎಷ್ಟೊಂದು ಏಕಾಗ್ರತೆ ಅವನಲ್ಲಿ.

ಅರೆ ಅಲ್ಲಿ ನೋಡಿ ಸಿಹಿತಿಂಡಿ ಮಾರುವವನೊಬ್ಬ ತಟ್ಟೆಗಳಲ್ಲಿ ಮೈಸೂರು ಪಾಕ್, ಲಡ್ಡು , ಜಿಲೇಬಿ,
ಚೌ ಚೌಗಳನ್ನು ಇಟ್ಟಿದ್ದಾನೆ.

ಇಲ್ಲೊಬ್ಬ ಆಗಲೇ ಕಡ್ಡಿ ಕರ್ಪೂರ ಅರಿಶಿನ ಕುಂಕುಮ ಜೋಡಿಸಿಟ್ಟು ಒಂದು ಕಟ್ಟು ಗಂಧದ ಕಡ್ಡಿ ಹಚ್ಚಿ ಅದರ ಘಮ್ಮನೆ ಸುವಾಸನೆಯಿಂದ ಗ್ರಾಹಕರನ್ನು ಆಕರ್ಷಿಸುತ್ತಿದ್ದಾನೆ.

ಹೊತ್ತು ಕಳೆದಂತೆ ಸಂತೆ ಕಳೆ ಕಟ್ಟುತ್ತಿದೆ.

ಬಟ್ಟೆ ಮಾರುವವನೊಬ್ಬ ಸೀರೆ ಪಂಚೆ ರವಿಕೆಗಳನ್ನು ದಾರವೊಂದಕ್ಕೆ ನೇತಾಕಿ ಟವೆಲ್ ಗಳನ್ನು ನೀಟಾಗಿ ಮಡಿಸುತ್ತಿದ್ದಾನೆ.

ಚಪ್ಪಲಿ ಮಾರುವವನೊಬ್ಬ ಪಾಲಿಷ್ ಮಾಡಿದ ತಳತಳ ಹೊಳೆಯುವ ಶೂಗಳನ್ನು ಜೋಡಿಸುತ್ತಿದ್ದಾನೆ.

ಎಲೆ ಅಡಿಕೆ ತೆಂಗಿನಕಾಯಿಯ ಅಂಗಡಿಯವನು ಲಗುಬುಗೆಯಿಂದ ಎಲ್ಲವನ್ನೂ ಪೇಪರ್ ನಲ್ಲಿ ಸುತ್ತಿ ಕೊಡುತ್ತಿದ್ದಾನೆ.

ಅರೆ ಬಂದ ನೋಡಿ ಬಲೂನು ಮಾಮ.
ಪೂಂ ಪೂಂ ಎಂದು ಸದ್ದು ಮಾಡುತ್ತಾ ಮಕ್ಕಳಿರುವ ಜಾಗಕ್ಕೆ ಹೋಗಿ ಜೋರಾಗಿ ಊದುತ್ತಿದ್ದಾನೆ.

ಬಳೆ ಟೇಪು ಮಾರುವ ಹೆಂಗಸು ಮದುವೆ ಹೆಣ್ಣಿಗೆ ನಗುನಗುತ್ತಾ ರೇಗಿಸುತ್ತಾ ಬಳೆ ತೊಡಿಸುತ್ತಿದ್ದಾಳೆ.
ಕೆಲವರು ಇದನ್ನು ನಿಂತು ನೋಡುತ್ತಿದ್ದಾರೆ.

ಅಲ್ಲಿ ಮರದ ಕೆಳಗೆ ಗಿಣಿ ಶಾಸ್ತ್ರದವನೊಬ್ಬ ಯಾರಿಗೋ ಭವಿಷ್ಯ ಹೇಳುತ್ತಿದ್ದಾನೆ. ಕುಕ್ಕರಗಾಲಿನಲ್ಲಿ ಕುಳಿತವನೊಬ್ಬ ಭಯಭಕ್ತಿಯಿಂದ ಅವನು ಜೇಳಿದ್ದನ್ನು ಕೇಳಿಸಿಕೊಳ್ಳುತ್ತಿದ್ದಾನೆ.

ಅಗೋ ಬಂದಾ ನೋಡಿ ಹುಲಿ ವೇಷದ ಹುಲಿರಾಯ. ಜಗ್ಗಜಗ್ಗನೆ ಕುಣಿಯುತ್ತಿದ್ದಾನೆ. ಮಕ್ಕಳು ಗಾಬರಿಯಿಂದ ಅಳುತ್ತಿವೆ.

ಪಕ್ಕದಲ್ಲೇ ಪುಂಗಿ ಊದುತ್ತಾ ಹಾವಾಡಿಗನೊಬ್ಬ ಜನಗಳನ್ನು ಕರೆಯುತ್ತಿದ್ದಾನೆ. ಆ ಗುಂಪಿನಲ್ಲಿ ಕೆಲವು ಪುಂಡ ಹುಡುಗರು ಹುಡುಗಿಯರನ್ನು ಕೆಣಕಿ ಉಗಿಸಿಕೊಳ್ಳುತ್ತಿದ್ದಾರೆ.

ಓ ಆಗಲೇ ಚರ್ಮ ಸುಲಿದ ಕುರಿ ಮೇಕೆಯ ಮಾಂಸವನ್ನು ನೇತಾಕಿದ್ದಾರೆ. ಅಲ್ಲಿಯೇ ಕೋಳಿಗಳ ಕೊಕ್ಕಕ್ಕೋ ಸದ್ದು ಕೇಳಿಸುತ್ತಿದೆ. ಪಕ್ಕದಲ್ಲೇ ಮೀನಿನ ವಾಸನೆ.

ಹೆಗಲ ಮೇಲೆ ಮಗುವನ್ನು ಕೂರಿಸಿಕೊಂಡು ರೈತನೊಬ್ಬ ಬರುತ್ತಿದ್ದರೆ, ಗೃಹಿಣಿಯೊಬ್ಬಳು ಕಂಕುಳಲ್ಲಿ ಮಗುವನ್ನು, ಕೈಯಲ್ಲಿ ಬ್ಯಾಗನ್ನು ಹಿಡಿದು ಬರುತ್ತಿದ್ದಾಳೆ.

ಅಲ್ಲೊಬ್ಬ ಟೀ ಕಾಫಿ ಎಂದು ಜೋರಾಗಿ ಕೂಗುತ್ತಾ ಬಂದ.ಬಿಸಿಬಿಸಿ ಬೊಂಡ ಬಜ್ಜಿ ತಟ್ಟೆಯಲ್ಲಿ ತಂದಿದ್ದಾನೆ.
ಚುರುಮುರಿಯವನೊಬ್ಬನೂ ಅಲ್ಲಿಯೇ ಸುತ್ತಾಡುತ್ತಿದ್ದಾನೆ.

ಅಗೋ ಅಲ್ಲಿ ಮರದ ಕೆಳಗೆ ಕುಡುಕರ ಗುಂಪೊಂದು ಇಸ್ಪೀಟ್ ಆಡುತ್ತಿದೆ. ಅದರ ಸುತ್ತಲೇ ವೇಶ್ಯೆಯೊಬ್ಬಳು ಗಾಡ ನೀಲಿ ಬಣ್ಣದ ಸೀರೆಯುಟ್ಟು ಕೆಂಪನೆಯ ತುಟಿಯಲ್ಲಿ ನಸುನಗುತ್ತಿದ್ದಾಳೆ.

ಒಳಗಡೆ ದ್ವಿಲಿಂಗಿಗಳು ಜೋರಾಗಿ ಚಪ್ಪಾಳೆ ತಟ್ಟುತ್ತಾ ತಮಗೆ ಇಷ್ಟಬಂದತೆ ಡ್ಯಾನ್ಸ್ ಮಾಡುತ್ತಾ ಹಣ ಕೇಳುತ್ತಿದ್ದಾರೆ.

ಇನ್ನೊಂದು ಗುಂಪಿನಲ್ಲಿ ಇದ್ದಕ್ಕಿದ್ದಂತೆ ಜಗಳ.ಎಲ್ಲೋ ದೂರದಲ್ಲಿ ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದ ಪೋಲೀಸಪ್ಪ ಇದನ್ನು ಗಮನಿಸಿ ಲಾಠಿ ಹಿಡಿದು ಬಂದ.

ಪುಟ್ಟ ಮಗುವೊಂದು ಪೀಪಿ ಊದುತ್ತಾ ಸಂಭ್ರಮ ಪಡುತ್ತಿದೆ.

ಅಬ್ಬಬ್ಬಾ ಎಷ್ಟೊಂದು ಸುಂದರ ನಮ್ಮೂರ ಜಾತ್ರೆ. ಜೀವನೋತ್ಸಾಹ ತುಂಬುವ ಬದುಕಲು ಕಲಿಸುವ ನಮ್ಮೂರ ಜಾತ್ರೆ ಒಮ್ಮೆ ನೋಡ ಬನ್ನಿ.

ನಿಮ್ಮ ಮಾಲ್ ಗಳ ಜಗಮಗಿಸುವ ಕೃತಕ ಅಲಂಕಾರದ ನಿರ್ಜೀವ ಶೋಕಿಯಲ್ಲ. ಸಂಬಂಧ ಬೆಸೆಯುವ ಜೀವಂತ ಜಾತ್ರೆ ನಮ್ಮೂರ ಜಾತ್ರೆ.ಒಮ್ಮೆ ನೋಡ ಬನ್ನಿ.

ಸಂಭ್ರಮ ಕಳಚಿಕೊಳ್ಳುತ್ತಿರುವ ಹಬ್ಬಗಳು :

ಸಂಪ್ರದಾಯ ಮತ್ತು ಆಚರಣೆಗಳಲ್ಲಿ ಒಂದಷ್ಟು ಮೌಡ್ಯ ತುಂಬಿದ್ದರೂ ಹಬ್ಬಗಳು ನಮ್ಮ ಸಮಾಜದ
ಬಹುಮುಖ್ಯ ಸಂಭ್ರಮಗಳು.

ಸ್ವಲ್ಪ ಹಿಂದಿನವರೆಗೂ ಹಬ್ಬಗಳು ರುಚಿಯಾದ ಊಟ ಮತ್ತು ಹೊಸ ಬಟ್ಟೆಗಳಿಗೆ ಆಕರ್ಷಕ ಸಮಯವಾಗಿತ್ತು. ಆದರೆ ಆಧುನಿಕತೆಯ ಭರದಲ್ಲಿ ಅದು ಇಂದು ಶಿಥಿಲವಾಗಿ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳುವ ಹಂತದಲ್ಲಿದೆ.
ಕೇವಲ ಕಾಟಾಚಾರದ, ತೋರಿಕೆಯ ಪ್ರದರ್ಶನವಾಗಿದೆ.

ಎಲ್ಲದರಲ್ಲಿಯೂ ಬದಲಾವಣೆಗಳಾಗುತ್ತಿರುವ ಈ ಘಟ್ಟದಲ್ಲಿ ಹಬ್ಬಗಳಲ್ಲಿಯೂ ಒಂದಿಷ್ಟು ಆಧುನಿಕತೆಯ ಆಚರಣೆಗಳನ್ನು ಅಳವಡಿಸಿಕೊಂಡರೆ ನಿಜಕ್ಕೂ ಮತ್ತೆ ಅದು ತನ್ನ ನಿಜ ಅರ್ಥದ ಸಂತೋಷ ಸಂಭ್ರಮಗಳ ಕೂಟಗಳಾಗಿ ಮಾರ್ಪಡಬಹುದು.

ಬಹುತೇಕರಲ್ಲಿ ಈಗ ಊಟ ಬಟ್ಟೆಗಳ ಸಂಭ್ರಮ ಅಷ್ಟಾಗಿ ಉಳಿದಿಲ್ಲ. ಎಲ್ಲಾ ರೀತಿಯ ಊಟ ಬಟ್ಟೆಗಳು ಎಲ್ಲಾ ಸಂದರ್ಭದಲ್ಲಿಯೂ ಲಭ್ಯವಿದೆ. ಅದಕ್ಕಾಗಿ ಹಬ್ಬಗಳಿಗಾಗಿ ಕಾಯುವ ಸ್ಥಿತಿ ಇಲ್ಲ.

ಆದರೆ ನಿಜವಾಗಿ ಕಾಣೆಯಾಗಿರುವುದು ಸ್ನೇಹ ಸಂಬಂಧಗಳು, ಆತ್ಮೀಯ ವಾತಾವರಣ ಮತ್ತು ಮಾನವೀಯ ಮೌಲ್ಯಗಳು.
ಅದನ್ನು ಪುನರ್ ಸ್ಥಾಪಿಸಲು ಹಬ್ಬಗಳನ್ನು ವೇದಿಕೆ ಮಾಡಿಕೊಳ್ಳಬಹುದು.

ಹೇಗೆ ವಿವಿಧ ಕಾರಣಗಳಿಗಾಗಿ
MODERN PARTY ಗಳನ್ನು ಆಯೋಜಿಸಲಾಗುತ್ತದೋ ಹಾಗೆ ಹಬ್ಬಗಳನ್ನು ಆತ್ಮೀಯರ, ಗೆಳೆಯರ,ಬಂಧುಗಳ ಸ್ನೇಹಕೂಟಗಳಾಗಿ ಮಾರ್ಪಡಿಸಿ ಮನಸ್ಸಿಗೆ ಮುದ ನೀಡುವಂತೆ ಮಾಡಿಕೊಳ್ಳಬಹುದು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ದಿನ ಹಿರಿಯರೊಂದಿಗೆ ಚಿಂತನ – ಮಂಥನ, ಮಕ್ಕಳಿಗೆ ಒಂದಿಷ್ಟು ಆಟಗಳು, ಭವಿಷ್ಯದ ಯೋಜನೆಗಳನ್ನು ಮನೆಯ ಒಳಗೇ ಚರ್ಚಿಸುವ ಒಂದು ವೇದಿಕೆ ಸೃಷ್ಟಿಸಬಹುದು.

ಅಲ್ಲದೆ ತೀರಾ ಕೆಳಸ್ತರದ, ಹಬ್ಬದ ಊಟಕ್ಕೆ ಆಸೆಪಡುವ ಒಂದಷ್ಟು ನಮ್ಮ ಸುತ್ತಮುತ್ತಲ ಬಡವರಿಗೆ ಒಳ್ಳೆಯ ಹಬ್ಬದೂಟ ಹಾಕುವ ಸ್ವಯಂ ತೃಪ್ತಿಯ ಕೆಲಸವನ್ನು ಮಾಡಬಹುದು. ಆಗ ಹಬ್ಬಗಳ ಮಹತ್ವ ಹೆಚ್ಚಾಗಿ ಆತ್ಮತೃಪ್ತಿಯ ಜೊತೆಗೆ ಮುಂದಿನ ಹಬ್ಬಕ್ಕೆ ಕಾಯುವ ಸಂತಸ ಉಳಿಯುತ್ತದೆ.

ಇಲ್ಲದಿದ್ದರೆ ಹಬ್ಬಗಳು ಒಣ ಆಚರಣೆಗಳಿಂದ ತಮ್ಮ ಪ್ರಾಮುಖ್ಯತೆ ಕಳೆದುಕೊಳ್ಳಬಹುದು.
ಟಿವಿ ಜ್ಯೋತಿಷಿಗಳ ಎಡಬಿಡಂಗಿತನದಿಂದ ತೀರಾ ಜೊಳ್ಳಾಗಬಹುದು ಮತ್ತು ಕುಟುಂಬ ವ್ಯವಸ್ಥೆ ಒಂದು ವ್ಯಾಪಾರಿ ಸಂಸ್ಥೆಯಾಗಿ ಬದಲಾಗಬಹುದು.

ಇದು ಅವರವರ ಅನುಕೂಲಗಳನ್ನು ಅವಲಂಬಿಸಿರುತ್ತವೆ. ನನ್ನ ಆಶಯ ಮತ್ತು ಅನಿಸಿಕೆ ಅಷ್ಟೆ

  • ವಿವೇಕಾನಂದ. ಹೆಚ್.ಕೆ.
Share This Article
Leave a comment