ಭದ್ರಾವತಿ ಶಾಸಕ ಸಂಗಮೇಶ್ ಪುತ್ರನ ಬಂಧನ

Team Newsnap
1 Min Read

ಭದ್ರಾವತಿಯ ಕಬಡ್ಡಿ ಪಂದ್ಯಾವಳಿಯ ಪ್ರಶಸ್ತಿ ‌ವಿತರಣೆ ವೇಳೆಯಲ್ಲಿ ಮಾರಮಾರಿ ಪ್ರಕರಣದಲ್ಲಿ ಶಾಸಕ ಬಿ.ಕೆ.ಸಂಗಮೇಶ್ ರ ಹಿರಿಯ ಪುತ್ರ ಬಸವರಾಜ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಬಸವರಾಜ್ ರನ್ನುಇಂದು ಬೆಳಗಿನ ಜಾವ ಬಂಧಿಸಿದ ಭದ್ರಾವತಿ ಪೊಲೀಸರು, ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ.

ಜಿಲ್ಲೆಯ ಭದ್ರಾವತಿ ಪಟ್ಟಣದ ಕನಕ ಮಂಟಪ ಮೈದಾನದಲ್ಲಿ ಫೆಬ್ರವರಿ 28 ರಂದು ಕಬಡ್ಡಿ ಪಂದ್ಯಾಟದ ವೇಳೆ ಗಲಾಟೆ ನಡೆದಿತ್ತು. ಪಂದ್ಯದ ಪ್ರಶಸ್ತಿ ಸ್ವೀಕರಿಸುವ ವೇಳೆ ಸ್ನೇಹ ಜೀವಿ ಉಮೇಶ್ ಎಂಬವರ ಮಲ್ನಾಡ್ ವಾರಿಯರ್ಸ್ ಹಾಗೂ ಧರ್ಮಪ್ರಸಾದ್ ಎಂಬವರ ಸ್ಟೀಲ್ ಟೈಂ ತಂಡಗಳ ನಡುವೆ ಪಂದ್ಯ ನಡೆದಿತ್ತು.

ಮಲ್ನಾಡ್ ವಾರಿಯರ್ಸ್ ಫೈನಲ್ ಪಂದ್ಯಾವಳಿಯಲ್ಲಿ ಗೆದ್ದಿದ್ದರೆ, ಸ್ಟೀಲ್ ಟೈಂ ತಂಡ ರನ್ನರ್ ಅಪ್ ಆಗಿತ್ತು. ಆದರೆ ಪ್ರಶಸ್ತಿ ಸ್ವೀಕಾರ ಸಮಾರಂಭದ ವೇಳೆ ಸ್ಟೀಲ್ ಟೈಂ ತಂಡದ ಹುಡುಗನೋರ್ವ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಈ ವೇಳೆ ಶಾಸಕ ಸಂಗಮೇಶ್ ಪುತ್ರ ಹಾಗೂ ಬೆಂಬಲಿಗರಿಂದ ಸ್ಟೀಲ್ ಟೈಂ ತಂಡದ ಮೇಲೆ ಹಲ್ಲೆಯಾಗಿತ್ತು ಎನ್ನಲಾಗಿದೆ.

ಈ ಸಂಬಂಧ ನಕುಲ್ ರೇವಣ್ಕರ್ ಎಂಬುವರು ಪೋಲಿಸ್ ಠಾಣೆಗೆ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಭದ್ರಾವತಿ ಶಾಸಕರ ಪುತ್ರ ಬಸವರಾಜ್ ಎ4 ಆರೋಪಿಯಾಗಿದ್ದಾರೆ, ಇಂದು ಬಂಧಿಸಿ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಗಲಾಟೆ ಸಂಬಂಧ 20 ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದುವರೆಗೆ 15ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.

Share This Article
Leave a comment