ನ್ಯೂಸ್ ಸ್ನ್ಯಾಪ್.
ವಿಶೇಷ ಪ್ರತಿನಿಧಿಯಿಂದ.
ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪನವರ ಆತ್ಮಚರಿತ್ರೆಯಲ್ಲಿ ಇದೊಂದು ರೋಮಾಂಚಕ ಅನುಭವ ದಾಖಲಾಗಬೇಕು .
ಇದು ಕಳೆದ 55 ವರ್ಷಗಳ ಹಿಂದಿನ ಮಾತು. ಮಂಡ್ಯದ ಮಾರುಕಟ್ಟೆಯಲ್ಲಿ ನಿಂಬೆಹಣ್ಣು ಮಾರುತ್ತಿದ್ದ ಯುವಕನೊಬ್ಬನು ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಅದೃಷ್ಟ ಹಾಗೂ ಹೋರಾಟದ ಪ್ರತಿಫಲದಿಂದ ಸಿಕ್ಕಿರುವ ಈ ಅಧಿಕಾರ ಯಡಿಯೂರಪ್ಪನವರ ಪೂರ್ವ ಜನ್ಮದ ಪುಣ್ಯವೂ ಆಗಿದೆ. ಮಂಡ್ಯ ಜಿಲ್ಲೆಯ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಇದುವರೆಗೂ ನಾಲ್ಕು ಬಾರಿ ಸಿಎಂ ಆಗಿದ್ದಾರೆ. ಈಗ ಮತ್ತೆ ಸಿಎಂ ಯೋಗ ದೊರಕಿದೆ.
ಕಡು ಬಡತನದಲ್ಲಿ ಬೆಳೆದು ಉತ್ತುಂಗಕ್ಕೆ ಬಂದವರು. ತೀರಾ ಚಿಕ್ಕ ವಯಸ್ಸಿನಲ್ಲೇ ತಂದೆ – ತಾಯಿಗಳನ್ನು ಕಳೆದುಕೊಂಡು ತಾತ (ತಾಯಿಯ ತಂದೆ) ಸಂಗಪ್ಪ ಹಾಗೂ ಭಾವ ಬಸವರಾಜು ಆಶ್ರಯದಲ್ಲಿ ಬೆಳೆದವರು. 1955 ರಿಂದ ಮಂಡ್ಯದ ಮುನ್ಸಿಪಲ್ (ಪುರಸಭೆ ಹೈಸ್ಕೂಲ್) ಸ್ಕೂಲ್ನಲ್ಲಿ 5 ವರ್ಷಗಳ ಕಾಲ ವಿದ್ಯಾಅಭ್ಯಾಸ ಜೊತೆಯಲ್ಲೇ ನಿಂಬೆಹಣ್ಣಿನ ವ್ಯಾಪಾರ, ಸಂಘ ಪರಿವಾರ ಸಂಪರ್ಕದಿಂದ ಇಂದು ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ.
ಮಂಡ್ಯ ಮಾರುಕಟ್ಟೆಯ ಹಿರಿಯ ತರಕಾರಿ ವ್ಯಾಪಾರಿ ಎಂ. ಬಿ. ದೇವರಸು ಯಡಿಯೂರಪ್ಪನವರ ಚಡ್ಡಿ ದೋಸ್ತು. ಮುಖ್ಯಮಂತ್ರಿ ಯಡಿಯೂರಪ್ಪನವರ ಬಾಲ್ಯದಿನಗಳ ಹೋರಾಟದ ಬದುಕು ವಿಭಿನ್ನವಾಗಿತ್ತು. ಯಡಿಯೂರಪ್ಪ ಕಷ್ಟ ಜೀವಿ, ಹೋರಾಟ ಮನೋಭಾವ, ಜೊತೆಗೆ ಒಂದಷ್ಟು ಮುಂಗೋಪ. ಆದರೆ ಛಲವಂತ. ಹಠವಾದಿ ಕಳೆದ 50 ವರ್ಷ ಹಿಂದಿನ ಯಡಿಯೂಪ್ಪರಪ್ಪ ಈಗಲೂ ಹಾಗೇ ಇದ್ದಾರೆ.
ತಂದೆ – ತಾಯಿ ತೀರಿ ಹೋದ ಮೇಲೆ ತಾತ ಸಂಗಪ್ಪನವರು ಮೊಮ್ಮಗ ಯಡಿಯೂರಪ್ಪನವರನ್ನು ಮಂಡ್ಯಕ್ಕೆ ಕರೆದುಕೊಂಡು ಬರುತ್ತಾರೆ. ಪೇಟೆ ಬೀದಿ ಹೊರ ವಲಯದಲ್ಲಿ ಬಾಡಿಗೆ ಮನೆ. ತಾತ, ಮೊಮ್ಮಗ ಹಾಗೂ ಅಕ್ಕ – ಭಾವ ಎಲ್ಲರೂ ಒಟ್ಟಿಗೆ ವಾಸ ಮಾಡುತ್ತಿರುತ್ತಾರೆ. ತಾತ ಸಂಗಪ್ಪ ಹಳ್ಳಿಗಳಿಗೆ ಹೋಗಿ ನಿಂಬೆಹಣ್ಣನ್ನು ಖರೀದಿಸಿ ತಂದ ನಂತರ ಮಂಡ್ಯದ ಮಾರುಕಟ್ಟೆಯಲ್ಲಿ ಇಟ್ಟು ಚಿಲ್ಲರೆ ವ್ಯಾಪಾರ ಮಾಡುತ್ತಾರೆ. ಅದೇ ಚಿಲ್ಲರೆ ವ್ಯಾಪಾರವನ್ನು ಯಡಿಯೂರಪ್ಪ ಮುಂದುವರೆಸುತ್ತಾರೆ.
ದಿನಚರಿ ಹೇಗಿತ್ತು?
ಯಡಿಯೂರಪ್ಪ ಬೆಳಿಗ್ಗೆ 6 ಗಂಟೆಯಿಂದ 9.30 ರವರಗೆ ಮಾರುಕಟ್ಟೆಯಲ್ಲಿ ನಿಂಬೆಹಣ್ಣು ಮಾರಬೇಕು. ನಂತರ ಮುನ್ಸಿಫಲ್ ಹೈಸ್ಕೂಲ್ ಗೆ ಓದಲು ಹೋಗಬೇಕು. ನಿತ್ಯವೂ ಇದೇ ಕಾಯಕ. ಆದರೆ ಪ್ರತಿ ಶನಿವಾರ ಮತ್ತು ಭಾನುವಾರ ಮಾತ್ರ ದಿನವಿಡಿ ನಿಂಬೆಹಣ್ಣು ವ್ಯಾಪಾರ ಮಾಡುತ್ತಿದ್ದರು. ಈ ಮಧ್ಯೆ ಆರ್ ಎಸ್ ಎಸ್ ನಂಟು ತುಂಬಾ ಇತ್ತು. ಬಿಡುವು ಮಾಡಿಕೊಂಡು ಸ್ವರ್ಣ ಸಂದ್ರದಲ್ಲಿದ್ದ ಸಂಘ ಪರಿವಾರ ಕಚೇರಿಗೆ ಖಾಕಿ ಚಡ್ಡಿ ಹಾಕಿಕೊಂಡು ಪೇರೆಡ್ ನಲ್ಲಿ ಪಾಲ್ಗೊಳ್ಳುತ್ತಿದ್ದರು. ಕಾರ್ಯಕ್ರಮ, ಬೈಟಕ್ ಗಳಿಗೆ ಹೋಗುತ್ತಿದ್ದರು. ಬ್ರಾಹ್ಮಣ ಹುಡುಗರ ಒಡನಾಟವೇ ಹೆಚ್ಚಿತ್ತು ಎನ್ನುವುದನ್ನು ಗಮನಿಸಿದ್ದೆ ಎನ್ನುವುದು ದೇವರಸು ಹೇಳುತ್ತಾರೆ.
15-16 ವರ್ಷದ ಯಡಿಯೂರಪ್ಪನವರು ವ್ಯಾಪಾರ ಮಾಡುವಾಗಲೂ ಅತೀಯಾದ ಶಿಸ್ತಿನ ಮನುಷ್ಯ. ಕೋಪ ಹೆಚ್ಚು. ನಕ್ಕಿದ್ದೇ ಅಪರೂಪ. ನಾನೊಬ್ಬನೇ ಯಡಿಯೂಪ್ಪನವರಿಗೆ ಧಮ್ಕಿ ಹಾಕುತ್ತಿದೆ. ನಿಂಬೆಹಣ್ಣಿನ ವ್ಯಾಪಾರ ಮಾಡುತ್ತಿದ್ದಾಗ ಗಿರಾಕಿ ಇಲ್ಲದ ವೇಳೆಯಲ್ಲೇ ಅಲ್ಲೇ ಪುಸ್ತಕ ಇಟ್ಟುಕೊಂಡು ಓದುತ್ತಿದ್ದರು.
ದಸರಾ ನೋಡಲು ಕಾಸಿಲ್ಲ – ಉದ್ಘಾಟನೆಯ ಭಾಗ್ಯ
ಯಡಿಯೂರಪ್ಪನವರಿಗೆ ಮಂಡ್ಯದಲ್ಲಿದ್ದಾಗ ದಸರಾ ನೋಡುವುದು ಎಂದರೆ ಬಲು ಇಷ್ಟವಾದ ಸಂಗತಿ. ಆಗ ದುಡ್ಡೇ ಇರುತ್ತಿರಲಿಲ್ಲ. 2 ಆಣೆ ಕೊಟ್ಟು ದಿನಪೂರ್ತಿ ಬಾಡಿಗೆ ಸೈಕಲ್ ತೆಗೆದುಕೊಂಡು ಮೈಸೂರಿಗೆ ದಸರಾ ನೋಡಲು ಹೋಗುತ್ತಿದ್ದರು. ಆ ಕಾಲದಲ್ಲಿ 2 ಆಣೆ ಹೊಂದಿಸುವುದೇ ದೊಡ್ಡ ಕಷ್ಟವಾಗಿತ್ತು. ಆದರೂ ದಸರಾ ನೋಡದೇ ಬಿಡುತ್ತಿರಲಿಲ್ಲ. ಆದರೆ ಈಗ ರಾಜ್ಯದ ಮುಖ್ಯಮಂತ್ರಿಯಾಗಿ ದಸರಾ ಉದ್ಘಾಟನೆಯ ಭಾಗ್ಯ ಯಡಿಯೂರಪ್ಪನವರಿಗೆ ಸಿಕ್ಕಿದೆ ಎಂದರೆ ಇದಕ್ಕಿಂತ ಲಕ್ ಯಾರಿಗೆ ಇರುತ್ತದೆ ಹೇಳಿ?
ಯಾರ ಹಣೆ ಬರಹದಲ್ಲಿ ಏನಿದೆಯೋ ಗೊತ್ತಿಲ್ಲ. ಕಷ್ಟ ,ಪರಿಶ್ರಮ,ನಿಷ್ಟೆ , ಹೋರಾಟ ಮನೋಭಾವನೆಯ ವ್ಯಕ್ತಿಗಳು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ಗೆಲ್ಲುತ್ತಾರೆ ಎನ್ನುವುದು ಯಡಿಯೂರಪ್ಪನವರ ಬದುಕೇ ಸಾಕ್ಷಿ.
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – ಯುವತಿ ಸಜೀವ ದಹನ