December 25, 2024

Newsnap Kannada

The World at your finger tips!

kuwj

ಸಂತ ಪರಂಪರೆಯ ಹರಿಕಾರ ಚಾರುಕೀರ್ತಿ ಭಟ್ಟಾರಕ ಶ್ರೀಗಳ ದಿವ್ಯ ದರ್ಶನವೇ ಒಂದು ಭಾಗ್ಯ – KUWJ ಅಧ್ಯಕ್ಷ ಶಿವಾನಂದ

Spread the love

ಶ್ರವಣಬೆಳಗೊಳದ ಸಂತ ಚಾರುಕೀರ್ತಿ ಭಟ್ಟಾರಕ ಶ್ರೀಗಳನ್ನು ಅವರನ್ನು ನೋಡುತ್ತಿದ್ದರೆ ಸಾಕು, ಅದೇನೊ ಒಂದು ರೀತಿಯ ಧನ್ಯತಾ ಭಾವ ನಮ್ಮ ಹೃದಯವನ್ನಾವರಿಸಿಕೊಂಡು ಬಿಡುತ್ತದೆ. ಮನದಾಳಾದಲ್ಲಿ ಭಕ್ತಿಯ ಭಾವ ಮೇಳೈಸುತ್ತದೆ.

ನಿಜ. ಬೆಳಗೊಳ ಬೆಳಗಿದ ನಿಜ ಸಂತ ಇವರು. ಸದಾ ಜ್ಞಾನಾರ್ಜನೆ ಮಾಡುತ್ತಲೇ ಮಹಾನ್ ವಿದ್ವತ್ ಪಡೆದಿದ್ದಲ್ಲದೆ ಪ್ರಾಕೃತ ಭಾಷೆಯಲ್ಲಿದ್ದ ಜೈನ ಸಾಹಿತ್ಯವನ್ನು ಧವಳ ಸಂಪುಟದ ರೂಪದಲ್ಲಿ ಕನ್ನಡಕ್ಕೆ ತಂದ ದೈತ್ಯ ಪ್ರತಿಭೆ ಶ್ರೀ ಚಾರುಕೀರ್ತಿ.

ಕಿರಿಯ ವಯಸ್ಸಿನಲ್ಲೇ ಪಟ್ಟಾಧಿಕಾರಕ್ಕೆ ಬಂದರೂ, ಸರ್ವ ಧರ್ಮ‌ ಸಹಿಷ್ಣುತಾ ಭಾವದಿಂದ, ಮಡಿಮೈಲಿಗೆ ಒಂದಿಷ್ಟು ದೂರ ಸರಿಸಿ, ಎಲ್ಲರನ್ನೊಳಗೊಳ್ಳುವ ಮಠವನ್ನಾಗಿಸಿ ಮೇರು ಎತ್ತರಕ್ಕೆ ಬೆಳೆಸಿದ ಹೆಗ್ಗಳಿಕೆ ಕೂಡ ಇವರದೇ.

ಸರ್ವಸ್ವ ಪರಿತ್ಯಾಗಿ ಶ್ರೀ ಗೊಮ್ಮಟೇಶ್ವರನ ಸನ್ನಿಧಿಯಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ನಡೆವ ಮಹಾಮಸ್ತಕಾಭಿಷೇಕ‌ಗಳನ್ನು ಸತತ‌ ನಾಲ್ಕು ಬಾರಿಯೂ
ತಮ್ಮದೇ ನೇತೃತ್ವದಲ್ಲಿ ಭಕ್ತಿ ಭಾವದಿಂದ ನಡೆಸಿದ ಕೀರ್ತಿ ಕೂಡ ಶ್ರೀ ಚಾರುಕೀರ್ತಿಗಳದ್ದೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತಿ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಸಂಘಟಿಸಿ ಸೈ ಅನ್ನಿಸಿಕೊಂಡ ಸಂಘಟಕ‌ ಸಂತನೂ ಇವರೇ.
ಈ‌ ರೀತಿಯ ಅದೆಷ್ಟು ಸಮ್ಮೇಳನ, ಸಮಾವೇಶ ಬೆಳಗೊಳದಲ್ಲಿ ನಡೆದಿವೆಯೊ‌? ಅದರ ಹಿಂದಿನ ಕರ್ತೃ ಶಕ್ತಿ ಸ್ವಾಮೀಜಿ ಎನ್ನುವುದನ್ನು ಯಾರು ಅಲ್ಲಗಳೆಯಲಾರರು.

ವಿಂಧ್ಯಾಗಿರಿ- ಚಂದ್ರಗಿರಿ ಎಂಬ
ಎರಡು ಬೆಟ್ಟಗಳ ನಡುವೆ ಮೈದಳೆದಿರುವ ಶ್ರವಣಬೆಳಗೊಳದಲ್ಲಿ ಕನ್ನಡಿ ಹಿಡಿದು ಜಗತ್ತಿನ ಜನರನ್ನು ಬಾಹುಬಲಿ ಸನ್ನಿಧಿಗೆ ಸೆಳೆಯಲು ಸ್ವಾಮೀಜಿ ಮಾಡಿರುವ ಧರ್ಮದ‌ ಕೈಂಕರ್ಯ ಕನ್ನಡ ನಾಡಿಗೆ‌ ಅಭಿಮಾನ ತರುವಂತಾದ್ದು.

ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಸ್ವಾಮೀಜಿ ಅವರೊಂದಿಗೆ ಒಡನಾಡಿದ, ಅಲ್ಲಿಯೇ ನೆಲೆ ನಿಂತು ನಾ ವರದಿ‌ ಮಾಡಿದ ದಿನಗಳನ್ನು ಮರೆಯಲಾಗದು.

ಮೊನ್ನೆ, ಹಾಸನಕ್ಕೆ ಹೋಗಿದ್ದಾಗ ಎಚ್.ಬಿ.ಮದನಗೌಡರು ಪೋನಾಯಿಸಿ, ಜೈನ ಬಸದಿಗೆ ಸ್ವಾಮೀಜಿ ಬಂದಿದ್ದಾರೆ. ಬಿಡುವಿದ್ದರೆ ಬನ್ನಿ ಎಂದರು.
ಒಂದು ಕ್ಷಣ ಕೂಡ ಹಿಂದೆ ಮುಂದೆ ಯೋಚಿಸದೆ ಅವರಿದ್ದಲ್ಲಿಗೆ ಹೊರಟಾಗ ನನಗೆ ಸಾಥ್ ನೀಡಿದ್ದು ಜಿ.ಪ್ರಕಾಶ್.

ಜೈನ‌ಮಂದಿರದೊಳಗೆ ಕಾಲಿಟ್ಟಾಗ ನಮಸ್ಕರಿಸಿದೆ. ಹೇಗಿದ್ದೀರಿ? ಬೆಂಗಳೂರಿನಿಂದ ಯಾವಾಗ ಬಂದ್ರಿ? ಕೇಳಿದರು. ‌
ಅಷ್ಟರಲ್ಲಿ ಮಧ್ಯ ಪ್ರವೇಶಿಸಿದ ನಮ್ಮ ಮದನಗೌಡರು, ಬೆಂಗಳೂರಿನಲ್ಲಿದ್ದು ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಒಳ್ಳೆಯ ಕೆಲಸ ಮಾಡಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಎಲ್ಲಾ ಪತ್ರಕರ್ತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಕೊಡಿಸಿದ್ದಾರೆ ಎಂದು ಹೇಳಿದಾಗ ಒಂದು ಕ್ಷಣ ನನ್ನ ಕಣ್ಣಲ್ಲಿ ಕಣ್ಣಿಟ್ಟು ಧನ್ಯತಾ ಭಾವದಿಂದ ನೋಡಿದರು. ನನಗದು ಅವರ ಭಾವವೇ ಆರ್ಶೀವಾದವಾಗಿ ಕಂಡಿತು. ಅಷ್ಟರಮಟ್ಟಿಗೆ ನಾನು ಧನ್ಯನಾದೆ.

ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ನೀವು ನಮ್ಮೂರಿನವರು ಎಂದು ಮುಕ್ತ ಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದರು. ಆಗ ಇನ್ನಷ್ಟು ಧನ್ಯತಾ ಭಾವ ಹೃದಯವನ್ನು ಆವರಿಸಿತು.

ಇಂತಹ ಸಂತರ ಸಂಖ್ಯೆ ಸಾವಿರವಾಗಲಿ ಎಂದುಕೊಂಡೆ. ಓದು, ಧ್ಯಾನ, ತಪಸ್ಸಿನಲ್ಲಿಯೇ ಜ್ಞಾನ ಸಿದ್ದಿಸಿಕೊಂಡ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನಡೆ, ನುಡಿ, ಆದರ್ಶಗಳು, ಈಗಿನ ಯುವ ಸ್ವಾಮೀಜಿಗಳಿಗೂ ಮಾದರಿಯಾಗಬೇಕು.

ಆಧ್ಯಾತ್ಮಿಕವಾಗಿ
ಅದೆಷ್ಟೇ ಎತ್ತರಕ್ಕೆ ಏರಿದರೂ, ಅದೇ ಸರಳತನವನ್ನೆ ಉಸಿರಾಗಿಸಿ, ಜೀವಿಸಿದ, ತನ್ನ ಬದುಕನ್ನೇ ಭಕ್ತರಿಗೆ ಸಮರ್ಪಿಸಿದ ಸಾಧಕ ಕರ್ಮಯೋಗಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಹೃದಯ ಪ್ರೀತಿ, ಸೌಹಾರ್ದತೆ ತುಂಬಿದ ಕಡಲು.
ಅದರಲ್ಲಿ ಮೊಗೆದಷ್ಟು ಭಕ್ತಿ, ಪ್ರೀತಿ ನಿಮ್ಮದು.

Copyright © All rights reserved Newsnap | Newsever by AF themes.
error: Content is protected !!