January 4, 2025

Newsnap Kannada

The World at your finger tips!

goodbye 2020 worst year

2020 ದುರಂತ ವರ್ಷ:ಕರಾಳ ಕೊರೋನಾ ಕಂಟಕ -ಮನುಷ್ಯನ ಜೀವ ಹಿಂಡಿದ ವೈರಸ್

Spread the love

ಈ ಕರಾಳ ಕೊರೋನಾ ಪ್ರಪಂಚದಾದ್ಯಂತ ಕೋಟ್ಯಾಂತರ ಅಮೂಲ್ಯ ಜೀವಗಳನ್ನು ತೆಗೆದಿದೆ.‌ಜೊತೆಗೆ ಪ್ರತಿಯೊಬ್ಬರ ಬದುಕನ್ನು ನಾಶ ಮಾಡಿತು. ಸತ್ವ ರಹಿತ, ನಿರ್ಜೀವ ವಾದ ಬದುಕು ಹೇಗೆ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟಿದ್ದೇ ಈ ಕರಾಳ ಕೊರೋನಾ.

ಮನುಷ್ಯ ಸಂಬಂಧಗಳಿಗೆ ಬೆಲೆ ಇಲ್ಲದಂತೆ ಈ ಬಡ ಜೀವ ಬದುಕಿದರೆ ಸಾಕಪ್ಪ ಎನ್ನುವಷ್ಟರ ಮಟ್ಟಿಗೆ ಕೊರೋನಾ ಮಾಹಾ ಮಾರಿ‌ ಕಾಡಿತು.ಭಾರತದಂತಹ ಬಹು ದೊಡ್ಡ ರಾಷ್ಟ್ರಕ್ಕೆ ದೊಡ್ಡ- ದೊಡ್ಡ ಸವಾಲು ಎದುರಾಗಿತ್ತು. ಇನ್ನೂ ಮುಂದಿನ ದಿನಗಳಲ್ಲೂ ಸಮಸ್ಯೆ, ಸವಾಲುಗಳು ಇದ್ದೇ ಇವೆ.

ಕೊರೋನಾ ಮಾಹಾ ಮಾರಿಯಿಂದ ನಾವು ಕಲಿತ ಪಾಠ ಎಂದರೆ ಹೆದರಿಕೊಂಡು ಜೀವ, ಜೀವನ ಕಳೆದುಕೊಳ್ಳುವುದರ ಬದಲು ಕೊರೋನಾ ಜೊತೆಯಲ್ಲಿ ಬದುಕು ಸಾಧಿಸುವುದನ್ನು ಕಲಿಯಬೇಕು. ಅದರ ಜೊತೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ರೂಪಿಸಿಕೊಳ್ಳುವುದೇ ಪರಿಹಾರದ ದೊಡ್ಡ ದಾರಿ ಎನ್ನುವುದು ದೇಶದ ಜನರ ಅರಿವಿಗೆ ಬಂದಿದೆ.

ಕೊರೊನಾ ಅನ್ನೋ ಮಹಾಮಾರಿ ಮಾಡಿರುವ ಅನಾಹುತಗಳು ಒಂದೆರಡಲ್ಲ. ಮಾರ್ಚ್​ನಿಂದ ಮೂರು ತಿಂಗಳು ದೇಶದಲ್ಲಿ ಲಾಕ್​ಡೌನ್ ಮಾಡಲಾಗಿತ್ತು. ಹಲವು ಮನೆಗೆ ಸೀಲ್​ಡೌನ್ ಮಾಡಲಾಗಿತ್ತು. ಕೆಲವು ಪ್ರದೇಶಗಳು ಕಂಟೇನ್ಮೆಂಟ್ ಬಜೋನ್​ಗಳಾಗಿದ್ದವು.‌ ಇದರಿಂದ ಆರ್ಥಿಕತೆ ಮೇಲೆ ಭಾರಿ ಹೊಡೆತ ಬಿತ್ತು. ಕೊರೊನಾ ಮಾರಿಯ ಅಬ್ಬರ ಕಡಿಮೆಯಾಯ್ತು ಅನ್ನೋ ಹೊತ್ತಲ್ಲೇ..


ಬ್ರಿಟನ್​ನಲ್ಲಿ ಬಣ್ಣ ಬದಲಿಸಿಕೊಂಡು ಮತ್ತೊಮ್ಮೆ ಎಂಟ್ರಿ ಕೊಟ್ಟಿರೋದ್ರಿಂದ ದೇಶಕ್ಕೆ ದೇಶವೇ ಬೆಚ್ಚಿ ಬಿದ್ದಿದೆ. ಜೊತೆಗೆ ಮತ್ತೆ ನೈಟ್​ ಕರ್ಫ್ಯೂ. ಸೀಲ್​ಡೌನ್ ಅನ್ನೋ ಶಬ್ದಗಳು ಕಿವಿಗೆ ಬೀಳುತ್ತವೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಎದುರಿಸಬೇಕಾಗುತ್ತದೆ.

ದೇಶದಲ್ಲಿ ಕೊರೋನಾ ಭೀಕರತೆಯನ್ನು ಸಮರ್ಥವಾಗಿ ಎದುರಿಸಿದ ಕೀರ್ತಿ ಕೇಂದ್ರ ‌ಮತ್ತು‌ ದೇಶದ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸಲ್ಲುತ್ತದೆ. ದೇಶದ ಜನರು ನೀಡಿದ ಸಹಕಾರ, ಕಷ್ಟ ಸುಖಕ್ಕೆ ಸ್ಪಂದಿಸಿ ರೀತಿ, ಉಳ್ಳವರು ದಾನ ಮಾಡಿ ದೊಡ್ಡತನ ತೋರಿದ್ದು ಎಲ್ಲವೂ ಅವಿಸ್ಮರಣೀಯ.

2020 ನೇ ವರ್ಷದಲ್ಲಿ ನಾವು ಏನನ್ನೂ ಗಳಿಸಲಿಲ್ಲ. ಕಳೆದುಕೊಂಡಿದ್ದೇ ಹೆಚ್ಚು. ಬದುಕಿಗೆ ಆಶ್ರಯ ‌ನೀಡುತ್ತಿದ್ದ ಕೋಟ್ಯಾಂತರ ಜೀವಗಳು ಮಣ್ಣಿನಲ್ಲಿ ಮಣ್ಣಾದವು. ಕೈಗಾರಿಕಾ ಕ್ಷೇತ್ರವೂ ಸೇರಿದಂತೆ ಬಹುತೇಕ ಕ್ಷೇತ್ರದ ಜನ‌ರು ಕೆಲಸ ಕಳೆದುಕೊಂಡು ಬೀದಿಗೆ ಬಂದರು. ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿತ್ತು. ಮಕ್ಕಳು ವಿದ್ಯಾಭ್ಯಾಸ ವನ್ನು ಕಳೆದುಕೊಂಡರು. ಆರೋಗ್ಯ, ಶೈಕ್ಷಣಿಕ, ಪ್ರವಾಸೋದ್ಯಮ, ಅಭಿವೃದ್ಧಿ ಸೇರಿದಂತೆ ಎಲ್ಲಾ ಕ್ಷೇತ್ರದ ಪ್ರಗತಿ ಬಂಜರು ಆಗಿದೆ.

2021 ರ ಹೊಸ ವರ್ಷದಲ್ಲಿ ಕೊರೋನಾ ಕಂಟಕದಿಂದ ಪಾರಾಗಿ ದೇಶ ಮತ್ತು ಜನ ಸಂಮೃದ್ಧಿಯಾಗಿ ಬದುಕು ಕಂಡುಕೊಳ್ಳುವ ಆಶಯ ಇಟ್ಟುಕೊಂಡು ಹೊಸ ವರ್ಷಕ್ಕೆ ಹೆಜ್ಜೆ ಹಾಕೋಣ.

Copyright © All rights reserved Newsnap | Newsever by AF themes.
error: Content is protected !!