ಕರ್ನಾಟಕ – ಕರುನಾಡು, ಕಪ್ಪು ಮಣ್ಣಿನ ನಾಡು, ಅತಿ ಹೆಚ್ಚು ಶ್ರೀಗಂಧ ಬೆಳೆಯುವ ನಾಡು. ಪಶ್ಚಿಮ ಘಟ್ಟಗಳ ಹಸಿರ ಹಾಸನ್ನೊದ್ದು ವೈವಿಧ್ಯಮಯ ಪ್ರಾಣಿ – ಪಕ್ಷಿ ಸಂಕುಲಗಳಿಗೆ ಆಶ್ರಯವನ್ನಿತ್ತ ನಾಡು. ಈ ನಾಡಿನ ಮೂಲ ಭಾಷೆ, ಮೌಲ್ಯ ಭಾಷೆ, ಅಮೂಲ್ಯ ಭಾಷೆ – ಕನ್ನಡ.
ಪ್ರಾಚೀನ ಕನ್ನರೀಸ್ ನಿಂದ ಹುಟ್ಟಿಕೊಂಡ ಎರಡು ಭಾಷೆಗಳು ಕನ್ನಡ ಮತ್ತು ತೆಲುಗು. ಈ ಎರಡೂ ಭಾಷೆಗಳ ಲಿಪಿಯಲ್ಲಿ ಸಾಮ್ಯವಿರುವುದನ್ನು ಗಮನಿಸಬಹುದು ನಾವು. ಈ ಭಾಷೆಗಳಲ್ಲಿ ಕನ್ನಡ ಹೆಸರಿಗೂ ಮತ್ತಷ್ಟು ವಿಶೇಷ ತರುವಂತೆ ತನ್ನ ಭಾಷಾ ನಿರೂಪಣೆಯಲ್ಲಿ ಮೇಲುಗೈ ಸಾಧಿಸಿತು. ಕನ್ನಡ ಭಾಷೆಯ ವಿಷಯವಾಗಿ ಲಭ್ಯವಿರುವ ಕ್ರಿ.ಶ 450 ವರ್ಷಕ್ಕೆ ಸೇರಿದ್ದಾದ ಹಲ್ಮಿಡಿ ಶಾಸನದಲ್ಲಿ ನಮಗೆ ಈ ಭಾಷೆಯ ರೂಪುರೇಷೆಗಳು ಸಿಕ್ಕುತ್ತವೆ. ದಕ್ಷಿಣಭಾರತದ ದ್ರಾವಿಡ ಸಂಸ್ಕೃತಿಯ ಎರಡನೆಯ ಪ್ರಾಚೀನ ಭಾಷೆ ಕನ್ನಡವಾಗಿದೆ. ಮೊದಲನೆಯ ಸ್ಥಾನವನ್ನು ತಮಿಳು ಗಿಟ್ಟಿಸಿಕೊಂಡರೆ, ತೆಲುಗು, ಮಲೆಯಾಳಂ ನಂತರದಲ್ಲಿ ಬರುತ್ತವೆ. 21 ನೇ ಶತಮಾನದ ಗಣತಿಯ ಪ್ರಕಾರ 38 ಮಿಲಿಯನ್ ಜನರು ಕನ್ನಡವನ್ನು ಮಾತೃಭಾಷೆಯಾಗಿ ಬಳಸುವುದಾದರೆ, 9 ರಿಂದ 10 ಮಿಲಿಯನ್ ಜನರು ಬಳಕೆಯ ಭಾಷೆಯಾಗಿ ಬಳಸುತ್ತಿರುತ್ತಾರೆ.
ಕನ್ನಡ ನಡೆದು ಬಂದ ಹಾದಿ:ಚಕ್ರವರ್ತಿ ಅಶೋಕನ ಕಾಲಮಾನದಲ್ಲಿ ಬ್ರಾಹ್ಮಿ ಲಿಪಿಯಿಂದ ತನ್ನ ಹುಟ್ಟನ್ನು ಪಡೆದುಕೊಂಡ ಕನ್ನಡ ಶಾತವಾಹನರು, ಕದಂಬರು, ಗಂಗರು, ರಾಷ್ಟçಕೂಟರು, ಚಾಲುಕ್ಯರ ಕಾಲದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಂಡಿದೆ. ವಿವಿಧ ಕಾಲಮಾನದ ಅಡಿಯಲ್ಲಿ ಕನ್ನಡವನ್ನು ಪೂರ್ವ ಹಳೆಗನ್ನಡ, ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎನ್ನುವಂತೆ ನಾಲ್ಕು ವಿಭಾಗವಾಗಿ ವಿಂಗಡಿಸಬಹುದು. ಇದರಲ್ಲಿ ಕ್ರಿ.ಶ ಹತ್ತನೆಯ ಶತಮಾನದವರೆಗೂ ಚಾಲ್ತಿಯಲ್ಲಿದ್ದ ಕನ್ನಡ ಭಾಷೆ ಪೂರ್ವ ಹಳೆಗನ್ನಡ ಭಾಷೆಯಾದರೆ ಹತ್ತರಿಂದ ಹನ್ನೆರಡನೆಯ ಶತಮಾನದವರೆಗೂ ಹಳೆಗನ್ನಡ ಭಾಷೆ ಬಳಕೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಅಲ್, ಉಳ್, ಒಳ್ ಮುಂತಾದ ಪದಗಳು ಈ ಕಾಲಮಾನದಲ್ಲಿ ಸಾಮಾನ್ಯ ಬಳಕೆಯಲ್ಲಿದ್ದುವು. ಬಹುವಚನದ ಬಳಕೆಯಲ್ಲಿ ಜನರ್ಗಳ್ ಎಂದೂ, ಸಂಖ್ಯೆಯ ಬಳಕೆಯಲ್ಲಿ ಒರ್, ಇರ್ಮೆ ಇಂತಹ ಪದಗಳನ್ನು ಬಳಸುತ್ತಿದ್ದರು. ಕ್ರಿ.ಶ ಹನ್ನೆರಡನೆಯ ಶತಮಾನದಿಂದ ಹದಿನೈದನೆಯ ಶತಮಾನದವರೆಗಿನ ಕನ್ನಡ ನಡುಗನ್ನಡವಾದರೆ ನಂತರದ ಕನ್ನಡ ಹೊಸಗನ್ನಡವಾಯಿತು. ಪ್ರತಿ ಹಂತದಲ್ಲಿಯೂ ಭಾಷೆಯ ಬಳಕೆ ಮತ್ತು ಲಿಪಿಯಲ್ಲಿ ಗಣನೀಯ ಬದಲಾವಣೆಯನ್ನು ಕಾಣಬಹುದು. ಸ್ವಾತಂತ್ರ‍್ಯದ ನಂತರದಲ್ಲಿ 1956 ರಲ್ಲಿ ನವೆಂಬರ್ 1 ರಂದು ದಕ್ಷಿಣ ಭಾರತದ ಕನ್ನಡ ಭಾಷೆಯನ್ನು ಮಾತೃಭಾಷೆಯನ್ನಾಗಿಸಿಕೊಂಡ ಜನರನ್ನು ಸೇರಿಸಿ ಏಕೀಕರಣಗೊಂಡ ನಾಡು “ಕರ್ನಾಟಕ”. ಈ ಸುಂದರ ನಾಡಿಗೆ ” ಕೃಷ್ಣ ಶರಾವತಿ ತುಂಗ ಕಾವೇರಿಯ ವರರಂಗ” ಎಂದು ನಾಡಗೀತೆಯನ್ನು ಬರೆದು ಅರ್ಪಿಸಿದವರು ರಾಷ್ಟ್ರಕವಿ ಶ್ರೀ ಕುವೆಂಪು.
ಕನ್ನಡ ಸಾಹಿತ್ಯ:
8 ನೆಯ ಶತಮಾನದ ನೃಪತುಂಗನ ಕವಿರಾಜಮಾರ್ಗ ಕನ್ನಡ ಕಾವ್ಯಕ್ಕೆ ಹೊಸ ಮಾರ್ಗವನ್ನೇ ಹಾಕಿಕೊಟ್ಟಿತು. ಅಂದಿನಿಂದ ಇಂದಿನವೆರೆಗೂ ಕನ್ನಡ ಕಾವ್ಯದ ವೈಭವ ಹೇಳತೀರದು. ಎಂಟು ಜ್ಞಾನಪೀಠಗಳ ಹಿರಿಮೆ ಕನ್ನಡ ಸಾಹಿತ್ಯ ಲೋಕದ್ದು. ಹನ್ನೆರಡನೆಯ ಶತಮಾನದ ಕೇಶಿರಾಜನ ಶಬ್ದಮಣಿದರ್ಪಣ ಕನ್ನಡದ ಮೊದಲ ಭಾಷಾಶಾಸ್ತ್ರಗ್ರಂಥ. ರತ್ನತ್ರಯರಾದ ಪಂಪ, ಪೊನ್ನ, ರನ್ನರ ಕೊಡುಗೆ ಅಪಾರ. ಕುಮಾರವ್ಯಾಸನ “ಭಾರತ” ಮಹಾಭಾರತದ ಸಂಕ್ಷೇಪ ಕಾವ್ಯ. ಚಾವುಂಡರಾಯ, ಗುಣವರ್ಮ, ಶ್ರೀವಿಜಯ ಹೀಗೆ ಹಲವಾರು ಸಾಹಿತಿಗಳ ಕೊಡುಗೆ ಕನ್ನಡ ಸಾಹಿತ್ಯಲಕ್ಷ್ಮಿಯನ್ನು ಮತ್ತೂ ಸಿರಿವಂತಳನ್ನಾಗಿ ಮಾಡಿದೆ. ಹದಿನಾರನೆಯ ಶತಮಾನದ ಆಚೆಗೆ ಹರಿದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಸುಲಲಿತವಾಗಿಸಿದ್ದಲ್ಲದೆ ಕಾವ್ಯಕ್ಕೆ ರಾಗಸಂಯೋಜನೆ ಬೆರೆತು ಸುಮಧುರವನ್ನಾಗಿ ಮಾಡಿದ್ದಿತು.
ಆಧುನಿಕ ಕನ್ನಡ ಸಾಹಿತ್ಯವನ್ನು ನವೋದಯ, ನವ್ಯ, ಬಂಡಾಯ ಮತ್ತು ದಲಿತ ಸಾಹಿತ್ಯಗಳಾಗಿ ವಿಂಗಡಿಸಿದ್ದು ಆಯಾ ಕಾಲಘಟ್ಟಗಳ ಚಳುವಳಿಯ ಮೂಲಕ. ಕುವೆಂಪು, ದ.ರಾ. ಬೇಂದ್ರೆ, ಪು.ತಿ. ನರಸಿಂಹಾಚಾರ್, ಕೆ. ಎಸ್. ನರಸಿಂಹಸ್ವಾಮಿ, ಗೋಪಾಲಕೃಷ್ಣ ಅಡಿಗರು ಕಾವ್ಯದ ಸೊಗಡನ್ನು ಹೆಚ್ಚಿಸಿದರೆ, ಕೆ. ಶಿವರಾಮಕಾರಂತರು ಕಾದಂಬರಿ, ವಿಜ್ಞಾನ, ವೈಚಾರಿಕತೆ, ನಿಘಂಟು ಹೀಗೆ ಹೊಸ ಪ್ರಯೋಗಗಳನ್ನು ಕನ್ನಡ ಸಾಹಿತ್ಯದಲ್ಲಿ ಮೂಡಿಸಿದರು. ಸಣ್ಣ ಕತೆಗಳಿಗೆ ಅಡಿಪಾಯವನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರರು ಹಾಕಿಕೊಟ್ಟರೆ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಹೊಸತೊಂದು ವೈಜ್ಞಾನಿಕ, ಪ್ರಾಕೃತಿಕ, ವೈಚಾರಿಕ ಲೋಕವನ್ನೇ ಕನ್ನಡ ಸಾಹಿತ್ಯದ ಮೂಲಕ ತೆರೆದಿಟ್ಟರು.
ಕನ್ನಡದ ಭಗವದ್ಗೀತೆ ಎಂದೇ ಸುಪ್ರಸಿದ್ಧವಾಗಿರುವ “ಮಂಕುತಿಮ್ಮನ ಕಗ್ಗ” ವನ್ನು ಡಿ.ವಿ ಗುಂಡಪ್ಪನವರು ಅಣಿಮಾಡಿಸಿದರೆ. ನಾಟಕಗಳಿಗೆ ವೇದಿಕೆ ಸಜ್ಜುಗೊಳಿಸಿದವರು ಕನ್ನಡ ನಾಟಕ ಪಿತಾಮಹ ಟಿ.ಪಿ ಕೈಲಾಸಂ, ಸಾಹಿತ್ಯದಲ್ಲಿ ಹಾಸ್ಯವೂ ಸಾಧ್ಯ ಎಂದು ತೋರಿಕೊಟ್ಟವರು ಬೀಚಿ, ಸಾಹಿತ್ಯಕ್ಕೂ ಪತ್ರಿಕೋದ್ಯಮಕ್ಕೂ ಕುಣಿಕೆ ಹಾಕಿದವರು ಪಿ. ಲಂಕೇಶರು, ಹಾ.ಮಾ.ನಾಯಕ, ಗಿರೀಶ್ ಕಾರ್ನಾಡ್, ಯು. ಆರ್. ಅನಂತಮೂರ್ತಿ, ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ, ಕೆ. ಎಸ್ ನಿಸಾರ್‌ಅಹಮದ್, ಜಿ.ಎಸ್.ಶಿವರುದ್ರಪ್ಪ,ಚಂದ್ರಶೇಖರ ಕಂಬಾರ,ವಿ.ಕೃ.ಗೋಕಾಕ್, ದಲಿತಕವಿ ಸಿದ್ಧಲಿಂಗಯ್ಯ ಹೀಗೆ ಕನ್ನಡ ಸಾಹಿತ್ಯಕ್ಕೆ ದುಡಿದವರ ಪಟ್ಟಿ ನಿಲ್ಲುವುದೇ ಇಲ್ಲ. ಇಷ್ಟೆಲ್ಲವನ್ನೂ ಮೀರಿ ತಮ್ಮ ಮಾತೃಭಾಷೆಯನ್ನು ದಾಟಿ ಕನ್ನಡವನ್ನು ಅಪ್ಪಿಕೊಂಡು ಕನ್ನಡಕ್ಕಾಗಿ ದುಡಿದ ಶ್ರೇಷ್ಠರು ಪು.ತಿ. ನರಸಿಂಹಾಚಾರ್ ಮುಂತಾದವರು.
ಕನ್ನಡದಲ್ಲಿ ಕನ್ನಡಾಭಿಮಾನದ ಸೊಗಡನ್ನು ತಂದುಕೊಟ್ಟವರು ಜಿ.ಪಿ ರಾಜರತ್ನಂ. ತಮ್ಮ “ರತ್ನನ ಪದಗಳು” ಕಾವ್ಯದ ಮೂಲಕ ಸರಳ ಕನ್ನಡದಲ್ಲಿ ಯೆಂಡ್ಕುಡ್ಕ ರತ್ನನನ್ನು ಅಪ್ಪಟ ಕನ್ನಡಾಭಿಮಾನಿಯನ್ನಾಗಿ ಮಾಡಿ ಬಾಯಿ ಹೊಲಿಸಿ ಹಾಕಿದರೂ ಮೂಗಿನಲ್ಲಿ ಕನ್ನಡ ಪದವಾಡಿಸಿ ಕನ್ನಡಾಭಿಮಾನದ ಪರಾಕಾಷ್ಟೆಯನ್ನು ಮೆರೆದಿದ್ದಾರೆ. ಕೆ. ಎಸ್. ನರಸಿಂಹಸ್ವಾಮಿಯವರು “ಮೈಸೂರು ಮಲ್ಲಿಗೆ” ಯನ್ನು ಬೆಳೆದ ಕಂಪು ಇನ್ನೂ ಕನ್ನಡದಲ್ಲಿ ಆರಿಲ್ಲ. ಕನ್ನಡದ ಸಾರ್ವಕಾಲಿಕ ಸಂಪದವಾಗಿ ಕನ್ನಡ ನಾಡು-ನುಡಿಯನ್ನು ಹಚ್ಚ ಹಸಿರಾಗಿಸಿದೆ.
“ಕನ್ನಡಾಂದ್ರೆ ಮೈಸೂರ್ ಮಲ್ಗೆ ಅರಳಿದ್ ದಂಡೆ ಹಾರ;
ಕನ್ನಡಾಂದ್ರೆ ರತ್ನನ್ ಪದಗೊಳ್ ಕಳಿತೈತ್ ಎದೆಯ ಭಾರ”
ಜನಮಾನಸದಲ್ಲಿ ನಿತ್ಯಬಳಕೆಯಲ್ಲಿ ಬದಲಾವಣೆಯ ಅಂಬೆಗಾಲಿಡುತ್ತಲೇ ಬೆಳೆದು ಬಂದ ಕನ್ನಡ ಇಂದು ನಮ್ಮ ನಿಮ್ಮ ಮನೆಯಲ್ಲಿ ಮನಸ್ಸಿನಲ್ಲಿ ನಿತ್ಯ ಶಾಶ್ವತ.ಅದೊಂದು ಕನ್ನಡಿಗರ ಮೈ-ಮನಗಳಲ್ಲಿ ಚಿಮ್ಮುವ ಭಾವ ಬುಗ್ಗೆ !
- ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
- ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ
- ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
- ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
More Stories
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
ಅಹಂಕಾರ , ಒಣಜಂಭ ಬೇಡ
ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್